ಪಕ್ಷಿಗಳಲ್ಲಿ ವಲಸೆ - 
	ಆಹಾರ ಸೇವನೆ ಮತ್ತು ಸಂತಾನವೃದ್ಧಿಗಾಗಿ ನಿಯತಕಾಲಿಕವಾಗಿ ಒಂದು ಭೌಗೋಳಿಕ ವಲಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಮೂಹಿಕವಾಗಿ ಪಕ್ಷಿಗಳು ಹಾರಿಹೋಗುವ ಪರಿಪಾಟ (ಮೈಗ್ರೇಷನ್). ಪಕ್ಷಿಗಳಲ್ಲಿ ವಲಸೆ ಎಷ್ಟು ವಿಶ್ವವ್ಯಾಪಿಯೋ ಅಷ್ಟೇ ವೈವಿಧ್ಯಪೂರ್ಣ. ಹಾಗಾಗಿ ಇದು ಎಲ್ಲರಿಗೂ ಪರಿಚಿತವಾದ ಸಂಗತಿಯಾಗಿದೆ. ಪಕ್ಷಗಳಲ್ಲಿ ಪರಿಚತ ಪ್ರಭೇದಗಳ ನಿಯತಕಾಲಿಕ ವಲಸೆ ಪೂರ್ವಪಶ್ಚಿಮಗಳಲ್ಲಿ ಮತ್ತು ಎರಡೂ ಗೋಳಾರ್ಧಗಳಲ್ಲಿ ಒಂದು ನಿತ್ಯ ವಿನೂತನ ನೋಟ. ಜಗತ್ತಿನ ಎಲ್ಲ ಭಾಗಗಳಲ್ಲಿ ಸಾಂಗ್‍ಸ್ಟರ್ ಹಕ್ಕಿಯ ವಾರ್ಷಿಕ ಆಗಮನ ವಸಂತ ಋತುವಿನ ಕುರುಹಾಗಿದೆ. ಆದಿಕಾಲದಿಂದಲೂ ಹಕ್ಕಿಗಳ ವಲಸೆ ನಡೆದು ಬಂದಿದೆಯಂಬುದಕ್ಕೆ ಐತಿಹಾಸಿಕ ದಾಖಲೆಗಳುಂಟು. ಹೆಸರಾಂತ ಕವಿ ಹೋಮರ್ ಪಕ್ಷಿಗಳ ವಲಸೆಯ ಬಗ್ಗೆ ಹೇಳಿದ್ದಾನೆ. ಬೈಬಲಿನಲ್ಲಿಕೂಡ ಇದರ ಬಗ್ಗೆ ಉಲ್ಲೇಖವುಂಟು. ಕ್ರಿ.ಪೂ. 384-322ರಲ್ಲಿ ಅರಿಸ್ಟಾಟಲನು ಅನೇಕಸಂಖ್ಯೆ ಹಕ್ಕಿಗಳ ವಲಸೆಯ ನಿಗದಿಯಾದ ದಿನಗಳ ಬಗ್ಗೆ ಬರೆದಿದ್ದಾನೆ. ಹೀಗೆ ಹಿಂದಿನಿಂದ ಇದು ನಮಗೆ ಪರಿಚಿತವಿದ್ದರೂ, ಕೇವಲ 20ನೆಯ ಶತಮಾನದಲ್ಲಿ ಪ್ರಾಣಿವಲಸೆಯ ಬಗ್ಗೆ ವಿಶೇಷ ಉತ್ಸಾಹ ತೋರಿಬಂದಿತು. ಹಕ್ಕಿಗಳಿಗೆ ಉಂಗುರು ಕಟ್ಟುವ ಅಭ್ಯಾಸದಿಂದಾಗಿ ವಲಸೆಗಾರ ಹಕ್ಕಿಗಳ ಬಗ್ಗೆ ಅನೇಕ ಮಾಹಿತಿಗಳು ದೊರಕಿವೆ. ಹಕ್ಕಿಗಳ ವಲಸೆಯನ್ನು ಪ್ರಾಯೋಗಿಕ ಜೀವಿಜ್ಞಾನದಂತೆ ವೈಜ್ಞಾನಿಕ ಬುನಾದಿಯ ಮೇಲೆ ಪರಿಶೋಧಿಸಲು ಸಾಧ್ಯವಾಯಿತು. ಉತ್ತರಾರ್ಧಗೋಳದಲ್ಲಿ, ಬಹುಸಂಖ್ಯಾತ ಪಕ್ಷಿ ಪ್ರಭೇದಗಳು ವಸಂತದಲ್ಲಿ ಉತ್ತರಕ್ಕೂ ವರ್ಷಕಾಲದಲ್ಲಿ ದಕ್ಷಿಣಕ್ಕೂ ಸಾಗುತ್ತವೆ. ಅವು ತಗ್ಗು ಪ್ರದೇಶದಿಂದ ಎತ್ತರ ಪ್ರದೇಶಗಳಿಗೂ ಅಥವಾ ಒಳನಾಡಿನಿಂದ ಸಮುದ್ರ ತೀರಗಳಿಗೂ ಹೋಗುವುದುಂಟು. ಈ ತೆರನ ಪಕ್ಷಿ ಸಂಚಲನೆಯನ್ನು ವಲಸೆಯೆಂದು ಕರೆಯಲಾಗುತ್ತದೆ. ವಲಸೆ ಕಾಲಕ್ರಮವಾಗಿ ಮಾತ್ರ ನಡೆಯುತ್ತದೆ. ಸಾಮಾನ್ಯವಾಗಿ ವಸಂತ ಹಾಗೂ ವರ್ಷಕಾಲಗಳಲ್ಲಿ ಇದು ನಡೆಯವುದುಂಟು. ಪ್ರತಿ ಪ್ರಭೇದವೂ ಚಳಿಗಾಲ ಮತ್ತು ಬೇಸಿಗೆಯಲ್ಲಿ ತನ್ನದೇ ಆದ ಪ್ರದೇಶಗಳಿಗೆ ಹೋಗುತ್ತವೆ.

	ಸಾಮಾನ್ಯವಾಗಿ ವಲಸೆಯ ಕಾಲ, ಕ್ರಮಿಸಿದ ದೂರ, ಪ್ರಭೇದದ ದೇಹದಾಢ್ರ್ಯತೆ, ಮತ್ತು ಕ್ಷಿಪ್ರ ಅಥವಾ ನಿಧಾನದಲ್ಲಿ ಮೊಟ್ಟೆಯಿಡುವುದರ ಮೇಲೆ ಅವಲಂಬಿಸಿದೆ. ಗುಬ್ಬಚ್ಚಿ ಗಾತ್ರದ ಪಕ್ಷಿಗಳು ಚಳಿಗಾಲದ ಹಾಗೂ ಬೇಸಿಗೆಕಾಲದ ಸ್ಥಳ ಪ್ರದೇಶಗಳ ಮಧ್ಯೆ ಕೇವಲ ನೂರಾರು ಮೈಲಿ ದೂರ ಮಾತ್ರ ಸಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಕಡಲ ಪಕ್ಷಿಗಳು ತಮ್ಮ ಚಳಿಗಾಲವನ್ನು ದಕ್ಷಿಣಾರ್ಧಗೋಳದಲ್ಲಿ ಕಳೆದು ಆರ್ಕಟಿಕ್ ವೃತ್ತದಲ್ಲಿ ಮೊಟ್ಟೆಯಿಡುತ್ತವೆ. ಹಕ್ಕಿಗಳು ಎಷ್ಟೇ ಶಕ್ತಿಯುತವಾಗಿದ್ದರೂ ಸಾವಿರಾರು ಮೈಲಿಗಳ ಯಾನ ಸ್ವಾಭಾವಿಕವಾಗಿ ಹೆಚ್ಚು ವೇಳೆಯನ್ನು ತೆಗೆದುಕೊಳ್ಳುತ್ತದೆ. ಆರ್ಟಿಕ್‍ಟರ್ನ್ ಪಕ್ಷಿ ಮೊಟ್ಟೆಯಿಡುವ ಕಾಲಗಳ ಮಧ್ಯೆ ಸುಮಾರು 2 ತಿಂಗಳಲ್ಲಿ ಆರ್ಕ್‍ಟಿಕ್‍ನಿಂದ ಅಂಟಾಕ್ರ್ಟಿಕ್ ಪ್ರದೇಶಕ್ಕೆ ಹೋಗಲು 35,200 ಕಿ.ಮೀ.ಗಳ ದೂರವನ್ನು ಕ್ರಮಿಸುತ್ತದೆ.

	ಅನೇಕ ಪ್ರಭೇದಗಳು ವರ್ಷಕಾಲದಲ್ಲಿ ದಕ್ಷಿಣ ದಿಕ್ಕಿನ ಬದಲಾಗಿ ಆಗ್ನೇಯಕ್ಕೂ, ವಸಂತದಲ್ಲಿ ವಾಯುವ್ಯಕ್ಕೂ ವಲಸೆ ಹೋಗುವುವು. ಮತ್ತೆ ಕೆಲವು ಹಕ್ಕಿಗಳು ನೇರವಾಗಿ ಪೂರ್ವಕ್ಕೋ ಪಶ್ಚಿಮಕ್ಕೋ ಹೋಗುತ್ತವೆ. ಉತ್ತರದ ಪ್ರಭೇದಗಳು ತಮ್ಮ ಸೀಮಿತ ಪ್ರದೇಶದ ದಕ್ಷಿಣದ ತುದಿಯಲ್ಲಿ ಚಳಿಗಾಲವನ್ನು ಕಳೆದು, ಉತ್ತರದಲ್ಲಿ ಮೊಟ್ಟೆಯಿಡುತ್ತವೆ. ದಕ್ಷಿಣಾರ್ಧಗೋಳದ ಹಕ್ಕಿಗಳು ಇದಕ್ಕೆ ವ್ಯತಿರಿಕ್ತವಾಗಿ ಸಾಗುತ್ತವೆ. ಆಹಾರದ ಪೂರೈಕೆ ವಲಸೆಗೆ ಒಂದು ಪ್ರಮುಖವಾದ ಅಂಶ. ಉತ್ತರದ ಅನೇಕ ಪಕ್ಷಿ ಪ್ರಭೇದಗಳು ಆಹಾರದ ಪೂರೈಕೆಗೋಸ್ಕರ ವಲಸೆ ಹೋಗುವುವು. ಆದರೆ ವಸಂತಕಾಲದಲ್ಲಿ ಉತ್ತರಕ್ಕೆ ವಲಸೆ ನಡೆಯುವುದೇಕೆ? ಚಳಿಗಾಲವನ್ನು ಉಷ್ಣಪ್ರದೇಶಗಳಲ್ಲಿ ಸುರಕ್ಷಿತವಾಗಿ ಕಳೆಯುವ ಹಕ್ಕಿಗಳು ಉತ್ತರಕ್ಕೆ ಹೋಗುವ ಕಾರಣವೇನು? ಇದರಲ್ಲಿ ಬಹುಶಃ ಹಲವು ಅನುಕೂಲಕರ ಕಾರಣಗಳಿರಬೇಕು. ಪಕ್ಷಿಗಳಿಗೂ ಅವುಗಳ ಮರಿಗಳಿಗೂ ಒಳ್ಳೆಯ ಆಹಾರ ದೊರಕುವುದು ಒಂದು ಕಾರಣವಾದರೆ ಉತ್ತರದ ದೀರ್ಘಾವಧಿಯ ದಿನಗಳಿಂದ ಆಹಾರಶೇಖರಣೆಗೆ ಹೆಚ್ಚಿನ ವೇಳೆ ದೊರೆಯುವುದು ಇನ್ನೊಂದು ಕಾರಣ. ಹೆಚ್ಚು ಪರಿಚಿತವಾದ ಉತ್ತರದ ಪಕ್ಷಿ ಪ್ರಭೇದಗಳು ದಕ್ಷಿಣದಲ್ಲಿ ವಾಸಿಸುವ ಹಕ್ಕಿಗಳಿಗಿಂತ ಹೆಚ್ಚು ಮೊಟ್ಟೆಗಳನ್ನಿಡುತ್ತವೆ. ಈ ಕಾರಣದಿಂದಲೇ ಅವು ಉತ್ತರಕ್ಕೆ ವಲಸೆ ಹೋಗುವುವು ಎಂದು ಹೇಳಲಾಗುವುದಿಲ್ಲ. ಆದರೆ ಪಕ್ಷಿ ವಲಸೆಯ ವಿಕಾಸವನ್ನು ಅವಲೋಕಿಸಿದಾಗ ಈ ಕಾರಣ ಸರಿಯಿರಬಹದು ಎನ್ನಿಸುತ್ತದೆ.

	ಅನೇಕ ಪಕ್ಷಿಗಳು ಹಗಲಿನಲ್ಲಿ ಯಾನ ಮಾಡುತ್ತವೆ. ಹೆಚ್ಚಿನ ಸಂಖ್ಯೆಯ ಹಕ್ಕಿಗಳ ಸ್ವಾಭಾವಿಕ ಚಟುವಟಿಕೆಗಳು ಹಗಲಿನಲ್ಲಿ ನಡೆದರು ಕೂಡ ಅವು ತಮ್ಮ ಪಯಣವನ್ನು ರಾತ್ರಿಕಾಲದಲ್ಲಿಯೇ ಮಾಡುತ್ತವೆ. ಒಂದು ಹಾರಾಟದಲ್ಲಿ ಎಷ್ಟು ದೂರ ಸಾಗುತ್ತವೆಂಬುದು ತಿಳಿದಿಲ್ಲ. ಕಡಲಪಕ್ಷಿಗಳು ಉತ್ತರ ಪ್ರದೇಶಗಳಿಗೆ ವಲಸೆ ಬಂದಾಗ ಎಷ್ಟು ಬಳಲಿರುತ್ತವೆಂದರೆ ಮುಂದಿನ ಪ್ರಾತಃಕಾಲವೆಲ್ಲ ನಿದ್ದೆಯಲ್ಲಿ ಕಳೆಯುತ್ತವೆ. ಇದರಿಂದ ಇವು ತುಂಬ ದೂರ ಸಾಗಿಬಂದಿರಬಹುದು ಎಂದು ಭಾಸವಾಗುತ್ತದೆ. ಪೆಸಿಫಿಕ್‍ನ ಗೋಲ್ಡನ್ ಫ್ಲೋವರ್ ಹಕ್ಕಿ ಅಲಾಸ್ಕದಿಂದ, ಮಧ್ಯೆ ಯಾವ ಭೂಭಾಗವನ್ನೂ ಸ್ಪರ್ಶಿಸದೆ 3,200 ಕಿ.ಮೀ.ಗಳ ದೂರ ಸಾಗಿ ಹವಾಯಿಯನ್ನು ತಲುಪುತ್ತದೆ. ಯೂರೋಪಿನ ಪೀವಿಟ್‍ಗಳು ಅಟ್ಲಾಂಟಿಕ್ ಸಾಗರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿಯಾಗಿ ದಾಟುವವು. ಕಾಗೆಗಳು ದಿನಕ್ಕೆ 32 ಕಿ.ಮೀ.ಗಳನ್ನು ಸಹಜವಾಗಿ ಕ್ರಮಿಸುತ್ತವೆ. ಬಹುಶಃ ಅವು 80 ಕಿ.ಮೀ.ಗಳಿಗಿಂತ ಹೆಚ್ಚು ದೂರ ವಲಸೆ ಹೋಗುವುದಿಲ್ಲ. ಹೀಗೆ ಸಾಗುತ್ತಲೇ ಅವು ತಮ್ಮ ಆಹಾರವನ್ನೂ ಗಳಿಸುತ್ತವೆ.

	ವಲಸೆಯ ಒಂದು ಗಮನಾರ್ಹ ಅಂಶ ಕಾಲನಿಷ್ಠೆ. ಸಣ್ಣಪುಟ್ಟ ಪಕ್ಷಿಗಳ ಮೇಲೆ ಹವಾಮಾನದ ಸ್ಥಿತಿಗತಿಗಳು ಪ್ರಭಾವ ಬೀರುತ್ತವೆ. ದೊಡ ಹಕ್ಕಿಗಳು ಬಹುಮಟ್ಟಿಗೆ ಹವಾಮಾನ ಪರಿಸ್ಥಿತಿಯನ್ನು ಎದುರಿಸುತ್ತವೆ. ಬೃಹತ್ತಾದ ಹಳದಿಕಾಲು (ಎಲ್ಲೋಲೆಗ್ಸ್) ಪಕ್ಷಿಗಳು ಪಟಗೋನಿಯದಿಂದ ಸುಮಾರು 12,800 ದಿಂದ 16,000 ಕಿ.ಮೀ.ಗಳಷ್ಟು ಹಾರಿ ಕೆನಡದ ಮಸ್ಕಗ್ಸ್‍ನಲ್ಲಿ ಮೊಟ್ಟೆಯಿಡುತ್ತವೆ. 14 ವರ್ಷಗಳ ಪರಿಶೀಲನೆಯಲ್ಲಿ ಅವು ಯಾವಾಗಲೂ ತಮ್ಮ ಕಾಲನಿಷ್ಠೆಯನ್ನು ಮರೆತಿಲ್ಲ. ಅನೇಕ ಪ್ರಭೇದಗಳ ಪಕ್ಷಿಗಳು ವರ್ಷಂಪ್ರತಿ ಒಂದೇ ಸ್ಥಳದಲ್ಲಿ ಅದೇ ಗೂಡಿಗೆ ತಪ್ಪದೇ ಹಿಂತಿರುಗಿರುವುದೂ ಉಂಟು. ಹಕ್ಕಿಗಳು ವಲಸೆ ಹೋಗುವಾಗ 3,000 ಅಡಿಗಿಂತ ಎತ್ತರದಲ್ಲಿ ಹಾರವುದು ವಿರಳ. ಅವುಗಳ ಸಾಮಾನ್ಯ ವೇಗ ಗಂಟೆಗೆ 32 ರಿಂದ 80 ಕಿ.ಮೀ. ಪರ್ವತ ಶ್ರೀಣಿಗಳನ್ನು ದಾಟುವಾಗ ಮಾತ್ರ 10,000 ಅಡಿಗಳ ಎತ್ತರವನ್ನು ಮುಟ್ಟುತ್ತವೆ. ದೂರದಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಎಲ್ಲ ಪಕ್ಷಿಗಳೂ ಭೂಪ್ರದೇಶದ ಗುರುತು ಹಾಗೂ ಜ್ಞಾಪಕಶಕ್ತಿಯ ಮೂಲಕ ತಮ್ಮ ನೆಲೆಗಳಿಗೆ ಹಿಂತಿರುಗುತ್ತವೆ. ಇದಕ್ಕೆ ಹೊರತಾದ ಹಕ್ಕಿಗಳೂ ಕೆಲವಾರುಂಟು. ಆಹಾರ, ಹವಾಮಾನ, ದಿನದ ಅವಧಿ ಇವೆಲ್ಲ ವಲಸೆಗೆ ಕಾರಣವೆನ್ನುವುದುಂಟು. ಆದರೆ ಇವುಗಳಿಗೆ ಆಧಾರ ಪ್ರಮಾಣ ಸಾಕಷ್ಟಿಲ್ಲ.

	ಪಕ್ಷಿಗಳ ಪ್ರಜನಕ್ರಿಯೆಯ ಅಂಗಗಳಲ್ಲಿ ಎರಡೂ ಲಿಂಗಗಳಲ್ಲಿ ಕಾಲಕ್ರಮವಾದ ಬದಲಾವಣೆಗಳುಂಟಾಗುತ್ತವೆ. ಚಳಿಗಾಲದಲ್ಲಿ ಈ ಅಂಗಗಳು ಸಣ್ಣದಾಗಿದ್ದುವು ವಸಂತದ ಆರಂಭದಲ್ಲಿ ದೊಡ್ಡದಾಗುತ್ತವೆ. ಮೊಟ್ಟೆಯಿಡುವ ಕಾಲಕ್ಕೆ ಅಧಿಕತಮ, ಗಾತ್ರವನ್ನು ಪಡೆಯುತ್ತವೆ. ಬೇಸಿಗೆಯೊಂದಿಗೆ ಕಡಿಮೆಗಾತ್ರಕ್ಕೆ ಇಳಿಯುತ್ತ ಕೊನೆಗೆ ತಮ್ಮ ಚಳಿಗಾಲದ ಸಾಮಾನ್ಯ ಗಾತ್ರವನ್ನು ಪಡೆಯುತ್ತವೆ. ಇವುಗಳಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ವಲಸೆಗೆ ಪ್ರಚೋದನೆಯನ್ನು ನೀಡಬಹುದು.
(ಜೆ.ಆರ್.ವಿ.)

	ಪಕ್ಷಿಗಳ ವಲಸೆಯ ವಿಷಯವಾಗಿ ಇಂದು ಸಾಕಷ್ಟು ಅಧ್ಯಯನಗಳು ಸಾಗಿದ್ದು, ಅದೊಂದು ಹುಟ್ಟಗುಣವೆಂದೂ, ಆಕಾಶದಲ್ಲಿನ ನಕ್ಷತ್ರಗಳ ವಿನ್ಯಾಸವನ್ನು ತಮ್ಮ ದಾರಿಗಾಗಿ ಅವಲಂಬಿಸಿವೆ ಎಂದು ಪ್ರಯೋಗಗಳಿಂದ ತಿಳಿದುಬಂದಿದೆ.

	ಇತ್ತೀಚೆಗೆ ಹಕ್ಕಿಗಳಿಗೆ ರೇಡಿಯೋ ಪ್ರೇರಕ ಹಾಗೂ ಗ್ರಾಹಕವನ್ನು ಅಳವಡಿಸಿ ಉಪಗ್ರಹಗಳ ನೆರವಿನಿಂದ ಅವು ವಲಸೆಹೋಗುವ ದಾರಿಯನ್ನು ಗಮನಿಸಿ ಅಧ್ಯಯನಕ್ಕೆ ದತ್ತಾಂಶಗಳನ್ನು ಪಡೆದುಕೊಳ್ಳಲಾಗುತ್ತಿದೆ.
										(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ